ಶುಭಾಗಮನ

​ವಿಷಯ ತಿಳಿದ ಆ ಶುಭ ದಿನ
ಹರುಷದೊಡನೆ ದುಗುಡ ಮನ..

ಈರ್ವರ ಸ್ವಾಸ್ಥ್ಯದ ಕಡೆ ಗಮನ
ಕೈಮುಗಿದು ಗೋವಿಂದಂಗೆ ನಮನ..

ಇಷ್ಟ ಕಷ್ಟಗಳ ನವ ಮಾಸ
ಕಾಯುವಿಕೆಯು ಬಹು ತ್ರಾಸ..

ಉದರದೊಳಗಿನ ಚಲನವಲನ
ಕಂಡು ವಿಸ್ಮಿತ, ಭಾವುಕ ನಯನ..

ಚೆಲುವ ಮಡದಿಯ ನಿರ್ಣಾಯಕ ದಿನ
ಆಚೆ ಬಂದೊಡೆ ಮೃದು ಮಿಲನ.. 😃

:ಆಕೃಶ

Advertisements

ಭಾವ-ಬಂಧ


ಅರಿತು ಬಾಳು ಭಾವಗಳ ಬಂಧನ,
ಹರುಷದೊಡನೆ ದುಃಖದ ಗೆಳೆತನ..

ಬಹು ದೂರ ಸಾಗುವ ಈ ಪಯಣ,
ಸುಖ ದುಃಖಗಳ ಸಮ ಮಿಶ್ರಣ..
ಸಿಹಿಯಪೇಕ್ಷಿಸದೆ ಸಾಗಿಸು ಜೀವನ,
ಕಹಿಯೊಡನೆ ಬರಲಿದೆ ಅನಿರೀಕ್ಷಿತ ದಿನ !

ಖುಷಿಯೊಡನೆ ಕೊರಗಿನ ಛಾಯೆ,
ತಂಗಾಳಿಯೊಂದಿಗಿನ ಕಾರ್ಮೋಡದ ಹಾಗೆ..
ಚಿಂತಿಸದಿರು ಕೆಲ ಕಾಲ ಕಾದು,
ಮರಳಲಿದೆ ಖುಷಿಯು ಹನಿಮಳೆಯ ಹಾಗೆ !

:ಆಕೃಶ

ನೆಲೆ

ಬಹು ವಿಶಾಲವೀ ಜಗವು..
ಎಲ್ಲಿ ಹೋದರಲ್ಲಿ ಮುದವು.

ನೆಗೆವ ಮನಕೆ ಬೇಕೊಂದು ತಾಣ..
ಸಂಸಾರವೇ ಅದಕೊಂದು ಬಾಣ.

ದಿಕ್ಕರಿಯದೆ ತೇಲುವ ಮೋಡವ,
ಗಿರಿ ತಡೆದು ಇಳಿಸಿದಂತೆ..
ವಿಸ್ಮಯವೀ ತುಂಬು ಪ್ರೀತಿ,
ಸ್ಥಿತ ಸ್ಥಳದಿ ಊರುವ ರೀತಿ !!

:ಆಕೃಶ

 

ನಮ್ಮ ದೇಶ

​ಯುಗ ಶತಮಾನಗಳ ಇತಿಹಾಸ,
ಜೀವ ಖನಿಜ ರಾಶಿಗಳಿಂದ ಶ್ರೀಮಂತ

ನಿರಂತರ ಜಗಬೆಳಗಿದ ವಿದ್ವಾಂಸ,
ಸ್ವಸ್ಥ ಜೀವನಕೆ ದಾರಿ ತೋರಿದ ಮಹಾಂತ

ಕಾಲಾಂತರ ಪರಕೀಯರ ಅಟ್ಟಹಾಸ,
ವಿದೇಶಿ ಮತ ಹೇರಿ ಶೋಷಿತ

ಅಂದರೂ..
ಅನ್ಯ ದೇಶಕ್ಕೆರಗದ ಶಾಂತಿದೂತ;
ಅಲ್ಲವೇ..
ಅತಿ ಸಹಿಷ್ಣುತ, ನಮ್ಮ ಭಾರತ ದೇಶ ! 

:ಆಕೃಶ

ಮಾಯಾಲೋಕ

ಪ್ರಾಣಿ ಪಕ್ಷಿ ಹೂ ಮರ ಸರೋವರ
ಬೆಟ್ಟ ಗುಡ್ಡಗಳ ಹಸಿರ ತೋರಣ,
ಜಗವು ಬಹು ಸುಂದರ ಮನೋಹರ
ಜಗದಿ ಜೀವನ ಸಮ್ಮೋಹಿತ ಪಯಣ.

ಹೊಳೆವ ಹೊನ್ನ ಆಭರಣಗಳು ಚೆಂದ
ಶೃಂಗಾರ ಉಡುಪ ಧರಿಸಲು ಅಂದ,
ನೆಲ ಜಲ ಮನೆ ಮಡದಿಯಿಂದ
ಮನ ಮರೆವ ಹೆಣ್ಣು ಗಂಡು ಸಂಬಂಧ.

ಭುವಿಯ ತುಂಬಾ ಆಕರ್ಷಣೆಯ ಸೆಳೆತ
ಸೌಂದರ್ಯದೆಡೆ ಮನದ ಮಿಡಿತ,
ಸೆಳೆತದ ಪರಿ ಅರಿಯುವ ಮುಂಚಿತ
ಭೂಮಿ ಒಡಲ ಸೇರುವುದು ಖಚಿತ.

:ಆಕೃಶ

ಜೀವನ ಚಕ್ರ

ಹನಿಯಾಗಿ ಧರೆಗಿಳಿದು
ತೊರೆಯಾಗಿ ಬೆಳೆಯುವೆ,
ಹಣೆಯಲಿ ಆಯಸ್ಸಿಲ್ಲದಿರೆ
ಮರ ನರರ ಪಾಲಾಗುವೆ..

ಕಾಲ ಕಳೆದಂತೆ ನದಿಗೆ ಬದಲಿ
ಸಾಗರದೊಡಲ ಸೇರುವೆ,
ಜೀವನದ ಸಂಜೆ ಕಳೆದು
ಆವಿಯಾಗಿ ಹೋಗುವೆ..

ಹೊತ್ತು ತಂದ ಖನಿಜಗಳ
ಕೊಂಡು ಹೋಗದಾದೆ..
ಸರ್ವ ಜೀವದ ಆತ್ಮಗಳಂತೆ
ಮತ್ತೆ ಮಳೆಯಾಗಿ ಬರುವೆ..

:ಆಕೃಶ

ಮನೆಯ ಕೋಣೆ

ಮನೆಯಲಿರಲು ಒಂದು ಕೋಣೆ
ಖಾಲಿ ಬಿಡದೆ ತುಂಬು ಒಡನೆ,
ಅಂತೆ ಕೂಡಿದ್ದೊಳ್ಳೆಯದಿರಲಿ
ಕೆಟ್ಟುದು ಒಳ ಸೇರದಿರಲಿ,
ಕಿಟಕಿಗಳ ಮುಚ್ಚಿ ಇಡದೆ
ಬೆಳಕ ಕರೆದು ಕಸವ ಬಿಡದೆ,
ಸ್ವಾಸ್ಥ್ಯದಿಂದಿರಲಿ ಚಂಚಲ ಮನವು
ದೇಹವೆಂಬ ಮನೆಯ ಕೋಣೆಯು..

:ಆಕೃಶ